Sunday, November 22, 2009

ವರ ಬೇಕಾಗಿದ್ದಾರೆ

ನಮ್ಮ ಪರಿಚಯದವರೊಬ್ಬರು ವರ ಹುಡುಕುತ್ತಿದ್ದಾರೆ. ವರನಿಗಿರಬೇಕಾದ ಲಕ್ಷಣಗಳ ಪಟ್ಟಿ ಹೀಗಿದೆ.
ತಮಿಳನೂ ಅಲ್ಲದ, ಕನ್ನಡಿಗನೂ ಅಲ್ಲದ, ಪೂರ್ವೀಕರು ತಮಿಳುನಾಡಿನಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವಂತಹ, ತಮಿಳು ಮರೆತಿರುವ, ಕನ್ನಡ ಕಲಿಯದ, ತಮಿಳ್ಗನ್ನಡ ಮಾತಾಡುವ, ಬೆಳ್ಳಗೆ, ತೆಳ್ಳಗಿರುವ, ದಪ್ಪ ಹುಡಿಗಿಯನ್ನು ಒಪ್ಪಿ ಕೊಳ್ಳುವಂತಹ, ಮೀಸೆ ಬಿಟ್ಟಿರುವ, ಹೆಂಡತಿಗೆ ಬೇಕೆನಿಸಿದಾಗ ಮೀಸೆ ಬೋಡಿಸಿಕೊಳ್ಳಬಲ್ಲ, ಈರುಳ್ಳೀ, ಬೆಳ್ಳುಳ್ಳಿ ತಿನ್ನದ, ಅದರ ವಾಸನೆಯನ್ನೂ ಸಹಿಸದೆ, ಹೊರಗಡೆ ಹೆಂಡತಿಗೆ, ಆಕೆಯ ಅಭಿರುಚಿಗೆ ತಕ್ಕಂತೆ ಪಾನಿಪೂರಿ, ಮಸಾಲಪೂರಿ ಕೊಡಿಸಬಲ್ಲ, ಮನೆಯಲ್ಲಿ ಪಂಚೆ ಉಟ್ಟುಕೊಳ್ಳುವ. ಶಾಪಿಂಗಿಗೆ ಜೀನ್ಸ್ ಹಾಕಿಕೊಳ್ಳುವ, ಸಂಸ್ಕೃತ, ವೇದಗಳ ಪಾಂಡಿತ್ಯ ಹೊಂದಿರುವ, ಭಾರಿ ಸಂಬಳ ತರುವ, ಸಾಫ಼್ಟ್ ವೇರ್ ಇಂಜಿನೀಯರ್ ವರ ಬೇಕಾಗಿದ್ದಾರೆ. ವೈದೀಕ ಕುಟುಂಬದಿಂದ ಬಂದಿರುವ, ವೈದೀಕ ಸಂಪ್ರದಾಯ ಪಾಲಿಸುವ, ಸಂದ್ಯಾವಂದನೆ ಮಾಡುವ, ತರ್ಪಣ ಬಿಡುವ, ಹೆಂಡತಿ ಬಯಸಿದಾಗ ಕ್ಷಾಣಾರ್ದದಲ್ಲಿ ಮಾರ್ಡನ್ ಆಗಬಲ್ಲ, ಬೆಂಗಳೂರಿನಲ್ಲಿ ನೆಲೆಸಿರುವ, ಆಗಾಗ ಹೆಂಡತಿಯನ್ನು ವಿದೇಶಕ್ಕೆ ಕರೆದೊಯ್ಯಬಲ್ಲ, ಶ್ರೀಮಂತ, ನಿರಹಂಕಾರಿ, ಅಪ್ಪ, ಅಮ್ಮ ಇಲ್ಲದ(ಉದ್ಬವ ಮೂರ್ತಿ), ಅಣ್ಣ, ತಂಗಿ, ಅತ್ತಿಗೆಯಿಲ್ಲದ, ಪಿತ್ರಾರ್ಜಿತ ಆಸ್ತಿ ಹೊಂದಿರುವ ವರ ಬೇಕಾಗಿದ್ದಾನೆ. ಆಫ಼ೀಸ್ನಲ್ಲಿ ದುಡಿದು, ಮನೆಯಲ್ಲಿ ವೈದೀಕ ಕರ್ಮಾಚರಣೆ ನಡೆಸುತ್ತಾ, ಹೆಂಡತಿಗೆ ಗೃಹ ಕೃತ್ಯ ಕಾರ್ಯಗಳಲ್ಲಿ ನೆರವಾಗಬಲ್ಲ ವರ ಬೇಕಾಗಿದ್ದಾನೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ.
ಹೆಂಡತಿಯೊಬ್ಭಳು ಶಾಪಿಂಗಿಗೆ ನಡೆದರೆ ಸಾಲದು ಕೋಟಿ ರುಪಾಯಿ.

ಕರೆಂಟು ಹೋದರೆ ಮನೆಯೋಳಗಿರಲಾರೆ, ಬೇಕೆಂದಳು ಉಪಿಎಸ್ಸು.
ಹೆಂಡತಿ ತವರಿಗೆ ಹೊರಡುವೆನೆಂದರೆ ಹತ್ತಿಸುವೆನು ಬಸ್ಸು.

ಕೈ ಹಿಡಿದವಳು ಮಾಡಿದ ಅಡುಗೆಯು ಅವಳಿಗೆ ಅದೆ ಚೆಂದ.
ಹೆಂಡತಿ ಮಾಡಿದ ಅಡುಗೆಯ ಹೊಗಳಲು ಸಂಸಾರವೆ ಆನಂದ.

ಸರ್ವಜ್ಣನ ವಚನವು ನಿಜವಾಗುವುದಿದ್ದರೆ ಕನಸೇ ಇರಬೇಕು.
ಮೆಚ್ಚಿ ನಡೆವ ಸತಿ ಸಿಗಬೇಕಿದ್ದರೆ ತ್ರೇತಾಯುಗವೇ ಬರಬೇಕು.

ಹೆಂಡತಿಯೊಂದಿಗೆ ಬಡತನ ಸಿರಿತನ ಏನೂ ತಿಳಿಯೊಲ್ಲ.
ಬಡತನವಾದರು ಸಿರಿತನವಾದರು ಅವಳದೆ ಎನದೆಲ್ಲ.

ಹೆಂಡತಿಯಾಸೆಯ ಅರಿಯದ ಗಂಡಿಗೆ ಬಾಳಲಿ ಸುಖವಿಲ್ಲ.
ಹೆಂಡತಿಯೊಲುಮೆಯ ಗಳಿಸದ ಗಂಡಿಗೆ ಬದುಕಿಲ್ಲ.

Saturday, November 21, 2009

ಮೊಬೈಲ್.. ಮೊಬೈಲ್

ನಾಗವಾರ ಸಿಗ್ನಲ್‍ನಲ್ಲಿ ಕಾರು  ನಿಲ್ಲಿಸಿ ಹಸಿರು ದೀಪಕ್ಕಾಗಿ ಕಾಯುತ್ತಿದ್ದೆ. ಹಲವಾರು ರೀತಿ ಬಿಕ್ಷೆಬೇಡುವವರು ಈ ಸಿಗ್ನಲ್‍ನಲ್ಲಿ ಕಾಣಸಿಗುತ್ತಾರೆ. ನಪುಂಸಕಲಿಂಗೀಯರು ಹಿಂದಿನ ಜನ್ಮದ ಸಾಲ ವಸೂಲಿಮಾಡುವವರಂತೆ ಧೋರಣೆಯಿಂದೆ ಬಿಕ್ಷೆ ಬೇಡಿದರೆ, ಇನ್ನು ಕೆಲವರು ಹಸಿಗೂಸನ್ನು ಬಿಸಿಲಿನಲ್ಲಿ ಓಣಗಿಸುತ್ತಾ ಕೂಸಿನ ಹೆಸರಿನಲ್ಲಿ ದೈನ್ಯತೆಯಿಂದ ಬಿಕ್ಷೆಬೇಡುತ್ತಾರೆ. ಕಿಟಕಿಯಿಂದಾಚೆ ಒಬ್ಬಾಕೆ ಮೊಬೈಲ್ ಹಿಡಿದು ಏನೋ ಕೇಳುತ್ತಿದ್ದಳು. ಕಿಟಕಿ ಗಾಜು ಇಳಿಸಿ ಏನೆಂದು ವಿಚಾರಿಸಿದೆ.

ಅಪ್ಪಾ, ಅಣ್ಣಾ, ೩ ತಿಂಗಳಿನಿಂದ ಮೊಬೈಲ್ ರಿಚಾರ್ಜ್ ಮಾಡಿಸಿಲ್ಲ. ಇನ್‍ಕಮಿಂಗ್ ಕೂಡ ಕಟ್ಮಾಡರೆ. ರೀಚಾರ್ಜ ಮಾಡಾಕೆ ದಾನ ಮಾಡಿ ಪುಣ್ಯ ಕಟ್ಟುಕೊಳ್ಳಿ ಅಣ್ಣಾ. ನಿಮಗೆ ಆ ದೇವರು ಆಪಲ್ ಐಫೋನ್ ಸಿಗೊಹಾಗೆ ಮಾಡ್ತಾನೆ ಅಯ್ಯಾ” ಎಂದು ದೈನ್ಯದಿಂದ ಬೇಡಿದಳು. ನನಗೂ ಆಕೆಯನ್ನು ನೋಡಿ ಮರುಕಹುಟ್ಟಿತು. ಊಟವಿಲ್ಲದಿದ್ದರೂ ಪರವಗಿಲ್ಲ. ಮೂರು ತಿಂಗಳಿನಿಂದ ಮೊಬೈಲ್ ಇಲ್ಲದೆ ಹೇಗೆ ಜೀವನ ಸಾಗಿಸುತ್ತಿದ್ದಾಳೆ ಎನಿಸಿತು. ಆಕೆಗೆ ಐದು ರೂಪಾಯಿ ಕೋಡಲು ಹೋದೆ. ಅವಳಿಗೆ ಇನ್ನೋಬ್ಬ ಬಿಕ್ಷುಕ ಫೋನ್ ಮಾಡಿದ್ದ. ಇವಳು “ಏನು ಇವತ್ತಿಂದ ಬ್ಯಾಂಗಳೂರ್ ಐಟಿ.ಕಾಮ್ ಶುರು ಆಗಿದೆಯಾ? ಹಂಗಾದ್ರೆ ಭಾರಿ ಬಿಕ್ಷೆನೆ ಸಿಕ್ಕೀತು” ಎಂದು ನಾನು ಕೊಡಲು ಹೋದ ಐದು ರೂಪಾಯಿಯನ್ನು ತೆಗೆದುಕೊಳ್ಳದೆ ಹೊಗಿಯೇಬಿಟ್ಟಳು.

ನಾಲ್ಕು ಮೊಬೈಲ್ ಏಕೆ?.

ನನ್ನ ಸ್ನೇಹಿತನೊಬ್ಭ ನಾಲ್ಕು ಮೊಬೈಲ್ ಹಿಡಿದು ತಿರಿಗುತ್ತಿದ್ದ. ನಾಲ್ಕು ಮೊಬೈಲ್ ಏಕೆ ಬೇಕೆಂದು ವಿಚಾರಿಸಿದೆ. ತನ್ನ ಹೆಂಡತಿಯದು ಏರ್ ಟೆಲ್ ಕನೆಕ್ಷನ್ ಮತ್ತು ನನ್ನ ತಾಯಿಯದು ಹಚ್ ಎಂದು, ಏರ್ ಟೆಲ್ ಉತ್ತಮ , ಹಚ್ ಉತ್ತಮ ಎಂದು ಸದ ಕಿತ್ತಾಡುತ್ತಾರೆಂದು, ಅವರನ್ನು ಸಮಾಧಾನ ಪಡಿಸಲು ಎರಡು ಮೊಬೈಲ್ ಬಳಸುತ್ತೇನೆಂದು ವಿವರಿಸಿದೆ. ಅಲ್ಲದೆ ತಾಯಿಗೆ ಫೋನ್ ಮಾಡುವಾಗ ಹಚ್ ನಿಂದ, ಹೆಂಡತಿಗೆ ಏರ್ ಟೆಲ್ ನಿಂದ ಮಾಡಿದರೆ ಹಣುವು ಉಳಿತಾಯವಾಗುತ್ತೆಂದು ಹೇಳಿದ. ಇನ್ನೆರಡು ಮೊಬೈಲ್ ಏಕೆಂದು ವಿಚಾರಿಸಲು ಒಂದು ಆಪೀಸ್ ಸಂಭಂದಿತ ವ್ಯವಹಾರಗಳಿಗೆಂದು, ಇನ್ನೊಂದು ಎಸ್ಟಿಡಿ ಮತ್ತು ಐಎಸ್‍ಡಿ ಕರೆಗಳನ್ನು ಮಾಡಲೇಂದು. ಹೇಳಿದ. ಎಲ್ಲರನ್ನೂ ಒಂದಲ್ಲ ಒಂದು ರೀತಿ ಮೂರ್ಖರನ್ನಗಿಸಿರುವ ಮೊಬೈಲ್ ಕಂಪನಿಗಳ ಚಾಲಾಕಿ ತನಕ್ಕೆ ಮೆಚ್ಚಲೇಬೇಕು.

 

ತರ್ಕಕ್ಕೆ(ಲಾಜಿಕ್) ನಿಲುಕದ್ದು.

ಇಂದು ಬೆಳಿಗ್ಗೆ ಲ್ಯಾಪ್‍ಟಾಪ್ ತೆಗೆದು ನೆಟ್ ಬ್ರೌಸ್ ಮಾಡಲು ಯತ್ನಿಸಿದೆ. ಎರರ್ ಇನ್ ಕನೆಕ್ಟಿಂಗ್ ನೆಟ್‍ರ್ವಕ್ ಎಂದು ಮೆಸೇಜ್ ಬಂತು. ಏನೋ ಸಮಸ್ಯೆ ಇರಬೇಕೆಂದು ತರ್ಕ ಮಾಡಿದೆ. ಲ್ಯಾಪ್‍ಟಾಪ್‍ನಿಂದ ವೈರ್ ಲೆಸ್ ರೂಟರ್ ಡಿಟೆಕ್ಟ್ ಆಗುತ್ತಿದೆಯೆ ಪರೀಕ್ಶಿಸಿದೆ. ಸರಿಯಾಗಿಗೆ ಇತ್ತು. ಲ್ಯಾಪ್‍ಟಾಪ್ ನೇರವಾಗಿ ಮಾಡೆಮ್‍ಗೆ ಕನೆಕ್ಟಮಾಡಿ ಪರೀಕ್ಷಿಸಿದೆ. ಅದು ಸರಿಯಾಗಿಯೆ ಇತ್ತು. ಲ್ಯಾಪ್‍ಟಾಪ್, ರೂಟರ್ ಮತ್ತು ಮಾಡೆಮ್ ಮೂರು ಸರಿಯಾಗಿಯೆ ಕೆಲಸ ಮಾಡುತ್ತಿದ್ದವು. ಹಾಗಿದ್ದರೆ ಸಮಸ್ಯ ರೂಟರ‍್ನಿಂದ ಲ್ಯಾಪ್‍ಟಾಪ್ ಕನೆಕ್ಟ ಮಾಡುವೆ ತಂತಿಯದ್ದಿರಬೇಕೆಂದು. ಊಹಿಸಿದೆ. ಆ ತಂತಿ ಬದಲಾಯಿಸಿದಾಗ ನೆಟ್ ಬ್ರೌಸ್ ಮಾಡಲು ಸಾದ್ಯವಾಯಿತು.

ಮೊನ್ನೆ ಪ್ರಾಜಾವಾಣಿಯಲ್ಲಿ ಸುಭಾಷಿತ ಓದಿದ್ದು ನೆನಪಾಯಿತು. ಎಲ್ಲದರ ಹಿಂದೆಯೂ ತರ್ಕವಿದೆ, ಕಾರಣವಿದೆ. ಯಾವುದು ಆಕ್ಸಿಡೆಂಟಲ್ ಅಲ್ಲ ಎಂದು ಒಬ್ಭ ದಾರ್ಶ್ನನಿಕನ ಮಾತನ್ನು ಮುದ್ರಿಸಿದ್ದರು. ನನಗೂ ಇದು ನಿಜವೆನಿಸಿತ್ತು. ಈ  ಪ್ರಪಂಚವೆ ತರ್ಕದ ಮೇಲೆ ನಿಂತಿದೆ. ಇಲ್ಲಿ ಯಾವುದೂ ತರ್ಕಕ್ಕೆ ನಿಲುಕದ್ದು ಇಲ್ಲವೇ ಇಲ್ಲ ಎನ್ನಿಸಿತು.  ನನ್ನ ಎಲ್ಲಾ ಕಂಪ್ಯೂಟರ್ ಪ್ರೊಗ್ರಾಮ್ ಹಿಂದೆಯೂ ತರ್ಕವಿದ್ದೆವಿರುತ್ತದೆ. ಹಾಗಾದರೆ ತರ್ಕಕ್ಕೆ ನಿಲುಕದ್ದು ಯಾವುದು ಎಂದು, ಯೋಚಿಸತೊಡಗಿದೆ. ಟೀವಿ ಚಾನಲ್‍ವೊಂದರಲ್ಲಿ ತರ್ಕಕ್ಕೆ ನಿಲುಕದ್ದು ಎಂಬ ಕಾರ್ಯಕ್ರಮ ಪ್ರಾಸಾರವಾಗುತ್ತಿತ್ತು. ಅದರಲ್ಲಿ ಭೂತ, ಪ್ರೇತಗಳ ಕಥೆಗಳನ್ನು ತೋರಿಸುತ್ತಿದ್ದರು. ನನಗೇನೊ ಇವು ಯಾವವು ತರ್ಕಕ್ಕೆ ನಿಲುಕದ್ದು ಎಂದೆನಿಸಲಿಲ್ಲ. ಈ ಕರ್ಯಕ್ರಮದಲ್ಲಿ ಭೂತ ಪ್ರೇತಗಳ ಹಿಂದಿನ ಕಥೆಯನ್ನು ಅವರೇ ಪ್ರಸಾರ ಮಾಡುತ್ತಿದ್ದರು. ಹಾಗದರೆ ಇವೆಲ್ಲದರ ಹಿಂದೆಯೂ ಒಂದು ಕಾರಣವಿದೆ. ಇವು ಯಾವುದು ತರ್ಕಕ್ಕೆ ನಿಲುಕದ್ದು ಅಲ್ಲವೆನಿಸಿತು. ಮೊನ್ನೆ ಮೊನ್ನೆ ಸೂಪರ್ ಹಿಟ್ಟಾದ ಅಪ್ತಮಿತ್ರ ಸಿನಿಮಾದಲ್ಲಿ ಪ್ರೇತಗಳು ಮನುಷ್ಯನ ಸುಪ್ತ ಮನಸ್ಸಿನ ಒಂದು ಕಲ್ಪನೆಯಷ್ಟೆ ಎಂದು ವಿಷ್ಣುವರ್ಧನ್ ಸಾಭೀತುಮಾಡುತ್ತಾರೆ. ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ಅನಂತನಾಗ್‍ರವರನ್ನು ಹಿಡಿಯುವ ಪ್ರೇತಕ್ಕೂ ಅವರನ್ನು ಕಾಡಿಸಲು ತನ್ನದ ಆದ ತರ್ಕವಿರುತ್ತದೆ. ಹಾಗದರೆ ತರ್ಕಕ್ಕೆ ನಿಲುಕದ್ದು ಯಾವುದೆಂದು ಯೋಚಿಸತೊಡಗಿದೆ. ಕೊನೆಗೂ ಹೊಳೆದೇ ಬಿಟ್ಟಿತು, ತರ್ಕಕ್ಕೆ ನಿಲುಕದ್ದು-ಹೆಂಡತಿಯ ಕೋಪ ಮತ್ತು ಅದರಿಂದಾಗುವ ಪರಿಣಾಮ. ಎಷ್ಟೋ ಭಾರಿ ನನ್ನವಳ ಕೋಪ ತಣ್ಣಗಾದ ಮೇಲೆ ಏಕೆ ಕೊಪಿಸಿಕೊಂಡೆಯೆಂದು. ಕೇಳಿದ್ದೇನೆ, ಅದಕ್ಕೆ ಅವಳು, ಕೋಪಕ್ಕೆ ಕಾರಣವಿರುವುದಿಲ್ಲವೆಂದ ಅದೊಂದು ಸಹಜ ಪ್ರಕ್ರಿಯೆಯೆಂದು, ಅದಕ್ಕೆ ಕಾರಣವಿರುವ ಅಗತ್ಯವೂ ಇಲ್ಲವೆಂದು. ಪ್ರತಿಯೊಂದರ ಹಿಂದೆಯೂ ತರ್ಕ, ಕಾರಣ ಹುಡುಕುವುದು ತಪ್ಪೆಂದು, ಹುಚ್ಚುತನವೆಂದು ನನ್ನ ಮೇಲೆ ಮತ್ತೊಮ್ಮೆ ಕೋಪಮಾಡಿಕೊಂಡು ಹೊರಟೇಬಿಟಳು. ತರ್ಕಕ್ಕೆ ನಿಲುಕದ್ದು ಹೆಂಡತಿಯ ಕೋಪವೆಂದು ನಿರ್ಧರಿಸಿದೆ.

Sunday, September 13, 2009

ಪುಷ್ಪಕ ವಿಮಾನದ ರಾವಣ ಶೂರ್ಪಣಕಿಯರು.

“ನಾನು ಕ್ಯಾಪ್ಟನ್, ರಾವಣೇಶ್ವರ ಮಾತಾಡಿರೋದು. ನಿಮಗೆಲ್ಲರಿಗೂ ನಮ್ಮ ವಿಮಾನಕ್ಕೆ ಸ್ವಾಗತ. ನಮ್ಮ ಪ್ರಯಾಣ ಈಗ ಪ್ರಾರಂಭವಾಗಲಿದೆ. ಎಲ್ಲರೂ ನಿಮ್ಮ ನಿಮ್ಮ ಇಷ್ಟ ದೇವರನ್ನು ಪ್ರಾರ್ಥನೆ ಮಾಡಿಕೊಳ್ಳಿ. ನಿಮಗೆಲ್ಲರಿಗೂ ಪ್ರಯಾಣ ಸುಖಕರವಾಗಿರಲಿ. ನಮಗೆ ಇನ್ನೊಮ್ಮೆ ನಿಮ್ಮನ್ನು ನೋಡುವ ಭಾಗ್ಯ ದೊರಕಲಿ ಎಂದು ಆಶಿಸುತ್ತೇನೆ. ಈ ನನ್ನ ತಂಗಿಯರು ನಮ್ಮ ವಿಮಾನದ ಜಾಗ್ರತಾ ಸಂದೇಶವನ್ನು ಕೊಡುತ್ತಾರೆ, ದಯವಿಟ್ಟು ಆಲಿಸಿ.”

ನಿಮಗೆಲ್ಲರಿಗೂ ನಮ್ಮ ವಿಮಾನಕ್ಕೆ ಮತ್ತೊಮ್ಮೆ ಸ್ವಾಗತ. ನಾವೆಲ್ಲರೂ ರಾವಣಯ್ಯನ ತಂಗಿಯರು. ಅರ್ಥಾತ್  ಸಾಕ್ಷಾತ್ ಶೂರ್ಪಣಕಿಯರು.  ನಾವೆಲ್ಲರು ರಾವಣಯ್ಯನ ಸಂಗಡ ಇದ್ದು, ನಿಮ್ಮ ಪ್ರಯಾಸ ಪ್ರಯಾಣವಾಗದಂತೆ ಎಚ್ಚರವಹಿಸುತ್ತೇವೆ.

ನೀವೆಲ್ಲರೂ ವಿಮಾನ ಹಾರುವಾಗ ಮತ್ತು ಇಳಿಯುವಾಗ ಆಸನದ ಪಟ್ಟಿಗಳನ್ನು ಕಟ್ಟಿಕೊಳ್ಳತಕ್ಕದ್ದು. ವಿಮಾನ ಕಳೆಗೆ ಬಿದ್ದರೆ, ನಿಮ್ಮ ದೇಹವು ಆಸನಕ್ಕೆ ಸಿಕ್ಕಿ ಹಾಕಿಕೊಳ್ಳುವುದರಿಂದ, ನಮಗೆ ನಿಮ್ಮನ್ನು ಗುರುತು ಹಚ್ಚಲು ಸುಲಭವಾಗುತ್ತದೆ. ಇಷ್ಟಲ್ಲದೆ ಇದರ ಹಿಂದೆ ಬೇರಿನ್ನಾವ ಸದುದ್ಡೇಶವೂ ಇಲ್ಲ. ನಿಮ್ಮ ಆಸನದ ಕೆಳಗೆ ನಿಮ್ಮ ಜೀವ ಕವಚವಿದೆ. ವಿಮಾನ ತುರ್ತಾಗಿ ಇಳಿಯ ಬೇಕಾಗಿಬಂದಾಗ ನೀವು ಈ ಕವಚವನ್ನು ತೆಗೆದು ನಿಮ್ಮ ಕತ್ತಿನ ಸುತ್ತ ಭದ್ರಪಡಿಸಿಕೊಳ್ಳಿರಿ. ಅದರಲ್ಲಿರುವ ಕೆಂಪು ತುದಿಗಳನ್ನು ಹಿಡಿದು ಎಳೆಯಿರಿ.ಜೀವ ಕವಚದಲ್ಲಿ ಗಾಳಿ ತುಂಬಿ ಉಬ್ಬಿಕೊಳ್ಳುತ್ತದೆ. ಹಾಗೆಂದು ನಾವು ನಂಬಿದ್ದೇವೆ. ನೀವು ನಂಬಿ. ನಂಬಿಕೆಯೆ ಜೀವನ.

ತುರ್ತುಪರಿಸ್ಠಿತಿಯಲ್ಲಿ ಬಾಗಿಲು ತಾನಾಗೆ ತೆಗೆದುಕೊಳ್ಳುತ್ತದೆ. ಆಂದರೆ ನಾವೇ ತೆಗೆಯುತ್ತೇವೆ. ನಿಮಗಿಂತ ಮುಂಚೆ ನಾವು ಹಾರಿ ಪಾರಾಗಿರುತ್ತೇವಲ್ಲ? ಹಾಗಾಗಿ ನಾವು ಹಾರಿ ಹೋಗುವಾಗ ತೆರೆದ ಬಾಗಿಲು ಹಾಗೆ ಬಿಟ್ಟು ಹೋಗಿರುತ್ತೇವೆ. ಅದು ನಿಮಗೆ ತಾನಾಗೆ ತೆರೆದುಕೊಂಡಂತೆ ಕಾಣುತ್ತದೆ. ಏಕೆಂದರೆ, ನಿಮ್ಮಲ್ಲಿ ಬಹಳಷ್ಟುಮಂದಿ ಉಚಿತ ಸುರಪಾನ ಮಾಡಿರುವುದರಿಂದ ನಿಮಗೆ ಇಲ್ಲಿನ ಆಗು ಹೋಗುಗಳ ಪರಿವೆಯೆ ಇರುವುದಿಲ್ಲ.

ಜೀವ ಕವಚಗಳು ನಿಮ್ಮ ಜೀವ ಉಳಿಸುತ್ತವೆಂಬ ಯಾವುದೆ ನಂಬಿಕೆಯಿಲ್ಲ. ಏಕೆಂದರೆ ಸಾಮಾನ್ಯವಾಗಿ ನಮ್ಮ ವಿಮಾನಗಳು ಬೀಳುವುದು ಮೇಲೇರುವಾಗ ಮತ್ತೆ ಕೆಳೆಗಿಳಿಯುವಾಗ. ಆಗ ನಿಮಗೆ ಹಾರಿಕೊಳ್ಳಲು ಯಾವುದೆ ಸಮುದ್ರವಿರುವುದಿಲ್ಲ. ರನ್ ವೇ ನಲ್ಲಿ ಬಿದ್ದು, ಪ್ರಾಣ ಬಿಡಲು ಈ ಜೀವ ಕವಚಗಳು ನಿಮ್ಮ ರಕ್ಶಣೆಗೆ ಬರುವುದಿಲ್ಲ. ಇದು ಕೇವಲ ನಿಮ್ಮ ಕಣ್ಣೊರೆಸುವ ಪ್ರಯತ್ನವಷ್ಟೆ. ಸಮುದ್ರದಲ್ಲಿ ಬಿದ್ದರೂ ಈ ಕವಚಗಳೊಡನೆ ನೀವು ಸಾವಿರಾರು ಮೈಲು ಈಜಿ ದಡ ಸೇರಬಹುದೆಂದು ನಂಬಿದ್ದರೆ ನಿಮ್ಮಷ್ಟು ಮೂರ್ಖರು ಇನ್ನಾರು ಇರಲಾರರು. ಇದು ಕೇವಲ ನಿಮ್ಮನ್ನು ತಿಮಿಂಗಲಗಳಿಗೆ ಆಹಾರವಾಗುವವರೆಗೂ ಜೀವದಿಂದಿರಿಸಲು ಮಾತ್ರ. ತಿಮಿಂಗಲಗಳಿಗೆ ತಾವು ತಮ್ಮ ಆಹಾರ ತಾಜಾವೆನಿಸಲಿ ಎಂದು ಮಾತ್ರ. ಸತ್ತ ಪ್ರಾಣಿಗಳನ್ನು ತಿನ್ನುವಾಗ ಅವುಗಳಿಗೆ ಹಳಸಲು ತಿಂದತೆ ಅನ್ನಿಸುತ್ತದೆ ಎಂದು ಕೇಳಿದ್ದೇವೆ. ವಿಮಾನ ಬೀಳದಿದ್ದರೆ ನಿಮಗೆ ಮೀನು ಆಹಾರ. ಬಿದ್ದರೆ ನೀವು ಮೀನುಗಳಿಗೆ ಆಹಾರ. ಆಹಾರ ಒದಗಿಸುವುದು ಶೂರ್ಪಣಕಿಯರಾದ ನಮ್ಮ ಕರ್ತವ್ಯ, ಯಾರಿಗೆ ಎಂಬುದು ಪ್ರಶ್ನಾರ್ಥಕ. ಇದನ್ನು ಕಾಲವೆ ನಿರ್ಧರಿಸಬೇಕಷ್ಟೆ. ಕಾಲಾಯ ತಸ್ಮೈ ನಮಃ.

ವಿಮಾನಕ್ಕೆ ಮುಂದೆ, ಹಿಂದೆ ಮತ್ತು ಮಧ್ಯೆ ಬಾಗಿಲಿಗಳಿರುತ್ಥವೆ. ನಿಮಗೆ ನೆಲದ ಮೇಲಿನ ಗುರುತುಗಳು ನಿಮ್ಮ ಹತ್ತಿರದ ಬಾಗಿಲಿಗೆ ದಾರಿ ತೋರಿಸುತ್ತವೆ. ಈ ಗುರುತುಗಳನ್ನು ನಾವು ಎಂದೂ ಕಂಡಿಲ್ಲ. ಕಾಣಿಸುವುದೂ ಇಲ್ಲ. ನಿಮಗಿದು ಗೊತ್ತಿರಲಿ, ನೀವು ಮೀನಿಗೆ ಆಹಾರವಾಗಲು ನಿಮ್ಮ ಹತ್ತಿರದ ದ್ವಾರ ನಿಮ್ಮ ಹಿಂದೆಯೂ ಇರಬಹುದು.

ಯಾರೊ ಹಿಂದಿನಿಂದ ತಟ್ಟಿದಂತಾಯಿತು.  ನಿದ್ದೆಯಿಂದ ಎಚ್ಚರವಯಿತು. ಗಗನ ಸಖಿಯೊಬ್ಬಳು ಮುಂದೆ ನಿಂತಿದ್ದಳು.

“Would you like to have vien or pasta for dinner”, sir” ಎಂದು ಕೇಳಿದಳು.

ನಾನು “Asian vegetarian meal” ಎಂದೆ.

“Sorry, sir its not their on your boarding card”.

“I had requested for Asian Indian vegetarian meal, but I don’t know why it is not mentioned on my boarding card”

“sorry, sir, thank you sir, welcome sir”

ಎಂದು ತನೆಗೆ ಗೊತ್ತಿದ್ದ ನಾಲ್ಕೇ ಇಂಗ್ಲೀಷ್ ಪದಗಳನು ಉಚ್ಚರಿಸಿ ಮುಂದೆ ಸರಿದಳು. ಏರ್‍ ಪಸ್ಟ್ ನ ಪ್ಯಾರಿಸ್ ಮುದುಕಿ. ಹೊಟ್ಟೆಯ ಮೇಲೆ(?) ತಣ್ಣೀರ್ ಕಾಗದ ಹಾಕಿಕೊಂಡು ಮಲಗಿದೆ.

ಮುಂದುವರೆಯಿತು ನನ್ನ ಕನಸಿನ ಲಹರಿ. ಈ ಬಾರಿ ರಾವಣಯ್ಯನೆ ಸ್ವತಹ ಮಾತಡತೊಡಗಿದ. ಪ್ರಯಾಣಿಕರೆ ದಯವಿಟ್ಟು ಸಹಕರಿಸಿ, ನಮ್ಮ ವಿಮಾನದಲ್ಲಿ ಕೇವಲ ನಾಲ್ಕು ಶೌಚಗೃಹಗಳಿವೆ. ಅವುಗಳನ್ನು ಸಾದ್ಯವಾದಷ್ಟು ತೆರವಾಗಿರಲು ಪ್ರಯತ್ನಿಸುತ್ತೇವೆ. ನಾವು ಕೊಡುವ ಊಟ ನಿಮ್ಮ ಹೊಟ್ಟೆಗೆ ಸಾಲುವುದಿಲ್ಲ. ಇನ್ನು ನಿಮ್ಮ ಶೌಚಕ್ಕೆ ಸಾಲುವುದೆ? ಸಾದ್ಯವೆ ಇಲ್ಲ. ಆದರೆ ಕೆಲವು ಮಹಿಳೆಯರು ಶೌಚಾಲಯವನ್ನು ಮೇಕಪ್ ರೂಮ್ ಆಗಿ ಉಪಯೋಗಿಸಲು ಶುರು ಮಾಡಿರುವುದರಿಂದ ನೀವು ಸಹನೆಯಿಂದ ಇರಬೇಕು.

ಮತ್ತೆ ಎಚ್ಚರವಾದಾಗ ಆಸನ ಪಟ್ಟಿ ದೀಪ ಉರಿಯತೊಡಗಿದ್ದವು. “shomomo… harika….. ma…sha…..ba…sa…” ಎಂದು ಕ್ಯಾಪ್ತನ್ ಏನೇನೊ ಬಡಬಡಿಸುತ್ತಿದ್ದ. ಪ್ರತಿಯೊಂದು ಬಾರಿಯೂ ವಿಮಾನ ಇಳಿಸಿವಾಗ ನನಗೊಂದು ಪರೀಕ್ಷೆಯಿದ್ದಂತೆ. ನಿಮಗೊಂದು ಪುನರ್ಜನ್ಮವಿದ್ಡಂತೆ ನಾವಿನ್ನೇನು ಪ್ಯಾರೀಸ್ ತಲುಪಲಿದ್ದೇವೆ. ತಲುಪಿದರೆ ನಾವು ಉಳಿದಂತೆ. ಇಲ್ಲದಿದ್ದರೆ ನಾನು ಮತ್ತು ನನ್ನ ತಂಗಿಯರು ಮಾತ್ರ ಉಳಿದಂತೆ ಎಂದು ಹೇಳಿರಬಹುದೆಂದು ಊಹಿಸಿದೆ.

ವಿಮಾನ ಪ್ಯಾರೀಸ್ ನಲ್ಲಿ ಇಳಿಯುವುದು. ಪ್ಯಾರೀಸ್ ಪ್ರಯಾನಣಿಕರಿಗೆ ಸ್ವಾಗತ. ಬೇರೆ ವಿಮಾನ ಹಿಡಿದು ಹೋಗುವವರಿಗೆ ನಿಮ್ಮನ್ನು ನನ್ನ ಇನ್ನೊಬ್ಬ ತಮ್ಮ ಮಹಿರಾವಣ ನೊಡಿಕೊಳ್ಳುತ್ತಾನೆ. ಎಂದು ಹೇಳಿ  ವಿಮಾನ ಭೂಮಿ ಸ್ಪರ್ಶಿಸಿದ.

ಚಿಕಾಗೊದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ನಾನು ಪ್ಯಾರೀಸ್ ನಲ್ಲಿ ವಿಮಾನ ಬದಲಿಸಬೇಕಿತ್ತು. ಪ್ಯಾರೀಸ್ ನಿಂದ ಬೆಂಗಳೂರಿಗೆ ಹೊರಡಬೇಕಿದ್ದ ಬೇರೆ ಟರ್ಮಿನಲ್ ಆದ್ದರಿಂದ ಬಸ್ ಹಿಡಿದು ಮತ್ತೊಂದು ಟರ್ಮಿನಲ್ ತಲುಪಿದೆ. ಅಲ್ಲಿ ಬೆಲ್ಟ್, ಚಪ್ಪಲಿ,ಪ್ಯಾ೦ಟ್ ಮತ್ತು ಎಲ್ಲ ಬಿಚ್ಚಿಸಿ ಬನಿಯನ್ ಮತ್ತು  ನಿಕ್ಕರ್ ನ್ನು ಹೊರತುಪಡಿಸಿ ಸಕಲ ಶೋಧ ಕಾರ್ಯಗಳು ಮುಗಿದ ಮೇಲೆ. ಗೇಟ್ ಸಿ ೮೦ ತಲುಪಿದೆ. ಅಲ್ಲಿ ಮಹಿರಾವಣನ ತಂಗಿಯರು ನನಗಿಂತ ಮುಂಚೆಯೆ ಹಾಜರಿದ್ದರು. ಅಲ್ಲಿಂದ ನಮ್ಮನ್ನು ಮತ್ತೊಂದು ಬಸ್ಸಿನಲ್ಲಿ ಕರೆದೊಯ್ಯತೊಡಗಿದರು. ಸುಮಾರು  ೨೦ ನಿಮಿಷಗಳಾದರೂ ಬಸ್ ವಿಮಾನ ಇರುವ ಸ್ಥಳ ತಲುಪದಿದ್ದದ್ದು ನೋಡಿ ನನಗೆ ಇದೇ ಬಸ್ಸಿನಲ್ಲಿ ಬೆಂಗಳೂರಿಗೆ ಕರೆಧೊಯ್ಯ ಬಹುದೆಂದು ಎಣಿಸಿದ್ದೆ. ೨೦ ನಿಮಿಷದನಂತರ ಯಾವುದೊ ಒ೦ದು ವಿಮಾನದ ಬಳಿ ಬಸ್ ನಿಲ್ಲಿಸಲಾಯಿತು. ನಾನು ಕೊನೆಗೂ ವಿಮಾನ ತಲುಪಿದೆನಲ್ಲ ವೆಂದು, ಬೆಂಗಳೂರೆ ತಲುಪಿದಷ್ಟು ಸಂತೋಷದಿಂದ  ವಿಮಾನ ಏರಿಕೊಂಡೆ. ಗಗನ ಸಖಿಯರ ನಮಸ್ಕಾರ ವಿಕಾರಗಳ್ಳೆಲ್ಲವೂ ಮುಗಿದನಂತರ ನನ್ನ ಆಸನ ಸೇರಿಕೊಂಡೆ.

ಮುಂದೆ ಮಹಿರಾವಣನ ಮತ್ತು ಅವನ ತಂಗಿಯರ ಸುರಕ್ಷತಾ ಸಂದೇಶಗಳು ಬರಬಹುದೆಂದು ಎದುರುನೊಡುತ್ತಾ ಕುಳಿತೆ. ಸುಮಾರು ಅರ್ಧ ತಾಸಾದರೂ, ಯಾವ ಸಂದೇಶಗಳೂ ಬರಲ್ಲಿಲ್ಲ.ವಿಮಾನ ಮೇಲೇರಲೂ ಇಲ್ಲ.

ಸ್ವಲ್ಪ ಸಮಯದ ನಂತರ ಮಹಿರಾವಣ ಮಾತನಾಡಲು ಶುರುಮಾಡಿದ. “computer three two” ಎಂದೇನೋ ಹೇಳಿದ. ಮತ್ತೆ ಸ್ವಲ್ಪ ಸಮಯದ ನಂತರ “೩೦ ಮಿನಿಟ್” ಎಂದು ಹೇಳಿದ” ಹಾಗೆ ಸಾಗಿತ್ತು ಅವನ ಪ್ರಾಲಾಫ. ಪ್ರತಿ ಅರ್ಧ ಗಂಟೆಗೊಮ್ಮೆ ಇನ್ನು ಕೆಲವೇ ನಿಮಿಷಗಳಲ್ಲಿ ವಿಮಾನ ಹಾರುತ್ತದೆ ಎಂದು ಗಣೀಶ ಚತುರ್ಥಿ ಸಂದರ್ಭದಲ್ಲಿ ಪೂಜೆಗೆ ಕರೆಯುವವರಂತೆ ಮತ್ತದೇ ಹೇಳಿಕೆಗಳನ್ನು ಹೇಳಿದ.

ನಮ್ಮ ಊರಿನಲ್ಲಿ ಗಣೇಶ ಚತುರ್ಥಿ ಸಂದರ್ಭ್ದದಲ್ಲಿ ರಸ್ತೆಗೊಂದು ಗಣೇಶ ಸಂಘಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳೂತ್ತವೆ. ಪ್ರತಿ ರಸ್ತೆಯಲ್ಲು ಗಣೇಶನ್ನನ್ನು ಕೂರಿಸಿ, “ಓಳಗೆ ಸೇರಿದರೆ ಕಡುಬು, ಗಣೇಶ ಆಗುವುನು ಗಂಡು” ಎಂದು ಕನ್ನಡ ಚಿತ್ರಗೀತೆಗಳನ್ನು ಗಣೇಶನಿಗೆ ಅಳವಡಿಸಿ ಗರ.. ಗರ ಸದ್ದು ಮಾಡುವ ದ್ವನಿವರ್ಧಕಗಳಿಂದ ಬೇಕಾದವರಿಗೂ ಬೇಡದವರಿಗೂ  ಕೇಳಿಸಿತ್ತಾರೆ. ಪ್ರತಿ ಹಾಡಿಗೊಮ್ಮೆ FM ರೇಡಿಯೋ ಜಾಕಿಗಳಂತೆ. “ಭಕ್ತ ಮಾಹಾಶಯರಲ್ಲಿ ವಿನಂತಿ, ಇನ್ನು ಕೆಲವೇ ಕ್ಷಣಗಳಲ್ಲಿ ಮಹಾಮಂಗಳಾರತಿ ಪ್ರಾರಂಭವಾಗುತ್ತದೆ ಎಂದು ಘೋಷಿಸುತ್ತಿರುತ್ತಾರೆ. ಆದರೆ, ಮಹಾಮಂಗಾಳಾರತಿ ಪ್ರಾರಂಭವಾಗುವುದು ರಾತ್ರಿ ಒಂಬತ್ತು ಗಂಟೆಗೆ. ಮಹಿರಾವಣ ಇದೇ ಧಾಟಿಯಲ್ಲಿ ಪ್ರಯಾಣಿಕರಲ್ಲಿ ವಿನಂತಿ. ಇನ್ನು ಕೆಲವೇ ಕ್ಷಣಗಳಲ್ಲಿ ವಿಮಾನ ಹಾರುತ್ತದೆ ಎಂದು ಪ್ರತಿ ೧೦ ನಿಮಿಷಗಳಿಗೊಮ್ಮೆ ಘೊಷಿಸ ತೊಡಗಿದ.

ರೇಡಿಯೊ ಜಾಕಿಗಳು ಹೇಳುವ ಚಿತ್ರನಟಿಯರ public ಆದ secret ಗಾಗಿ ಕೇಳಲು ಕಷ್ಟವಾದ ಹಾಡುಗಳನ್ನು ಕೇಳುವ FM ರೇಡಿಯೊ ಪ್ರೇಕ್ಷಕನಂತೆ ಮಹಿರಾವಣನ ಸಂದೇಷಕ್ಕಾಗಿ ಎದುರು ನೋಡಿತ್ತ ಕುಳಿತೆ. ಆದರೆ ಏನು ಪ್ರಯೋಜನವಾಗಲಿಲ್ಲ. ಬೇರೆ ಬೇರೆ ಕರ್ಯಕ್ರಮಗಳ ಹೆಸರಿನಲ್ಲಿ ಅದೇ ಕರಣ ಕಠೋರ ಹಾಡುಗಳನ್ನು ಪ್ರಸಾರ ಮಾಡುವ FM ರೇಡಿಯೋಗಳಂತೆ ಮಹಿರಾವಣ ಅದೇ ಹಾಡನ್ನು ಹಾಡತೊಡಗಿದ. ಈ ಮದ್ಯೆ ಅಮೇರಿಕನೊಬ್ಬ ಮಹಿರಾವಣನ ಶಿಷ್ಯನೊಬ್ಬನೊಡನೆ ಜಗಳವಾಡತೊಡಗಿದೆ.

ನನ್ನ ಹಿಂದೆ ವಯಸ್ಸಾದ (ಸುಮರು ೬೦) ಕನ್ನಡ(?) ದಂಪತಿಗಳಿಬ್ಬರು ಕುಳಿತಿದ್ದರು. ಅವರ ಹಿಂದೆ ಸುಮಾರು ಅದೆ ವಯಸ್ಸಿನ ಇನ್ನಿಬ್ಬರು ದಂಪತಿಗಳು ಕುಳಿತಿದ್ದರು. ಮೊದಲನೆಯಾಕೆ ತನ್ನ ಗಂಡನೊಂದಿಗೆ ಅಮೆರಿಕದವನನ್ನು ಬಯ್ಯುತ್ತ “ಈ ಮನುಷ್ಯ ಯಾಕೆ ಜಗಳವಾಡುತ್ತಿದ್ದಾನೊ ತಿಳಿಯುತ್ತಿಲ್ಲ. ಕೆಳಗಿರುವಾಗಲೆ ಎಲ್ಲ ರಿಪೇರಿ ಮುಗಿಸಿಕೋಂಡು ಮೇಲೆ ಮೇಲೇರಬೇಕಲ್ಲವೆ. ಗಡಿಬಿಡಿಯಲ್ಲಿ ಮೇಲೆಹಾರಿದರೆ ಎನಾದರು ಹೆಚ್ಚುಕಡಿಮೆ ಆದರೆ ಏನು ಗತಿ? ಅಲ್ಲಿ ನಿಲ್ಲಿಸಿ ರಿಪೇರಿ ಮಾಡಲು ಇದೇನು ನಮ್ಮ ಊರಿನ ಮಾರುತಿ ಮೋಟಾರ್ ಸರ್ವೀಸ್ ಬಸ್ಸಾ?” ಎಂದು ಬಿಳಿಯನ ಬಗ್ಗೆ ಅಸಮಧಾನ ವಕ್ತ ಪಡಿಸಿದಳು.  ಇದನ್ನು ಕೇಳಿದ ಎರಡನೆ ದಂಪತಿಗಳು

ನೀವು ಕನ್ನಡದವರಾ” ಎಂದು ವಿಚ್ಚಾರಿಸಿದರು.

ಅದಕ್ಕೆ ಮೊದಲನೆಯವರು “ನೀವು?” ಎಂದು ಕೇಳಿದಳು.

“ನಾವು ಬೆಂಗಳೂರಿನವರೆ, ಒಂಥರಾ ಕನ್ನಡದವರೇ” ಎಂದು ಉತ್ತರಿಸಿದರು.

ಮೊದಲನೆಯಾಕೆ “ನೀವು ವೆಜಿಟೇರಿಯನ್ನಾ?” ಎಂದರು. 

“ಹೂ” ಎಂದುತ್ತರ ಬಂತು.

ಇಬ್ಬರು ಭಾರತಿಯರು ಪ್ಯಾರೀಸ್ ವಿಮಾನದಲ್ಲಿ ಭೇಟಿಯಾದರೂ ಪರಿಚಯಕ್ಕೂ ಮೊದಲು ಒಬ್ಬರು ಇನ್ನೊಬ್ಬರ ಜಾತಿ , ಭಾಷೆ ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಭಾರತಿಯರು ಎಲ್ಲೆ ಇದ್ದರೂ ಏನೇ ಆದರೂ ಭಾರತೀಯರ ಮೂಲ ಗುಣ ಬಿಡದಿದ್ದದು ನೋಡಿ ನನಗೆ ಭಾರತೀಯನಾಗಿರಲು ಹೆಮ್ಮೆ ಎನಿಸಿತ್ತು.

ಎರಡನೆಯಾಕೆ ನಾವು ಸಂಕೇತಿಗಳು. ಕನ್ನಡ, ತೆಲುಗು, ತಮಿಳು ಮೂರು ಕಲಂದು ಮಾತನಾಡುತ್ತೀವಿ. ನಮ್ಮ ಮಗ ಚಿಕಾಗೊದಲ್ಲಿದ್ದಾನೆ. ಮಗ, ಮೊಮ್ಮ್ಗಗ, ಸೊಸೆ ಎಲ್ಲರು ಚಿಕಾಗೊದಲ್ಲಿದ್ದಾರೆ. ಎಲ್ಲರನ್ನು ನೊಡಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ ಎಂದು ಸಂಕ್ಷಿಪ್ತವಾಗಿ ತಾವು ಪ್ರಯಾಣಿಸುತ್ತಿರುವ ಕಾರಣವನ್ನು ವಿವರಿಸಿದರು.

ಮೊದಲೆನೆಯಾಕೆ ನಮ್ಮ ಮನೆಯಲ್ಲಿ ನಮ್ಮ ಅಪ್ಪ ಅಮ್ಮ,ತಮ್ಮ, ಮಗ ಸೊಸೆ, ನಾವೆಲ್ಲರೂ ಅಮೇರಿಕಾದಲ್ಲೇ ಇರೋದು. ನಮ್ಮ ಕೆಲವೇ ನೆಂಟರು ಇಂಡಿಯಾದಲ್ಲೆ ಉಳಿದುಕೊಂಡು ಬಿಟ್ಟಿದ್ದಾರೆ. ಹಾಗೆ, ನಮ್ಮ ಕುಲದೇವರು ಮೇಲುಕೋಟೆ ಚೆಲುವನಾರಯಣಸ್ವಾಮಿಯವರು ಇಂಡಿಯಾದಲ್ಲಿ ಉಳಿದುಕೊಂಡು ಬಿಟ್ಟಿದ್ದಾರೆ. ಎಲ್ಲರನ್ನು ಒಮ್ಮೆ ನೋಡಿಕೊಂಡು ಬರೋಣ ಅಂತ ಹೊರಟಿದೀವಿ ಎಂದು ಮೊದಲನೆಯಕೆ ವಿವರಿಸಿದಳು.

ನಮಗೇನೊ ಇಂಡಿಯಾನೆ ಇಷ್ಟಾನಪ್ಪ. ಏನು ಮಾಡೊದು ನಮ್ಮ ಸೊಸೆ ತುಂಬಾ ಹಠ ಮಾಡಿ ನಮ್ಮ ಮಗನನ್ನು ಕರೆದು ಕೊಂಡು ಅಮೇರಿಕಾಕ್ಕೆ ಹೊರಟುಬಿಟ್ಟಳು. ಎಂದು ಸೊಸೆಯನ್ನು ದೂಷಿಸಲು ಶುರುಮಾಡಿದಳು. ಇದಕ್ಕೆ ಮೊದಲನೆಯಾಕೆ ಈಗಿನ ಕಾಲದ ಸೊಸೆಯರೆ ಅಷ್ಟು ಎಂದು ಸೇರಿಸಿದಳು. ಅಲ್ಲಿ ಏಕ್ತಾಕಪೂರ್ ನಾ ಟಿವಿ ಸೀರಿಯಲ್ ಪ್ರಾರಂಭವಾಗುವ ಎಲ್ಲಾ  ಸೂಚನೆಗಳು ಕಂಡದ್ದರಿಂದ ನಾನು ಅಮೇರಿಕನ್ನನ ಜಗಳವೇನಾಗಿರಬಹುದೆಂದು ಅತ್ತ ಗಮನಹರಿಸಿದೆ.

ಮಹಿರಾವಣನ ಶಿಷ್ಯ ಅಮೇರಿಕದವನಿಗೆ ವಿವರಿಸುತ್ತಿದ್ದ. ನಮ್ಮ ಹತ್ತ್ತಿರ ಮೂರು ಕಂಪ್ಯೂಟರ್ ಇದೆ. ಅದರಲ್ಲಿ ಎರಡು ಚೆನ್ನಗಿದೆ. ಒಂದು ಕೆಟ್ಟಿದೆ. ಅದನ್ನು ರಿಪೇರಿ ಮಾಡಲು ಹೇಳಿ ಕಳಿಸಿದ್ದೇವೆ. ಇನ್ನೇನು ಸ್ವಲ್ಫದಲ್ಲೇ ರಿಪೇರಿಯಾಗುತ್ತದೆ ಎಂದು ವಿವರಿಸ ತೊಡಗಿದ್ದ. ನನಗೆ ಈ ವಿವರಣೆ ತೀರ ಅಸಂಬದ್ದವೆನಿಸಿದರು ಬೇರೆ ದಾರಿಯಿಲ್ಲದೆ ಸುಮ್ಮನೆ ಕೇಳುತ್ತ ಕುಳಿತೆ. ಇದೇ ರೀತಿ ಕಂಪ್ಯೂಟರ್ ರಿಪೇರಿ ಪ್ರಹಸನ ಎರಡು ಮೂರು ಗಂಟೆಗಳ ಕಾಲ ನಡೆಯಿತು.

ಈ ಮದ್ಯೆ ಮಹಿರಾವಣನ ತಂಗಿಯೊಬ್ಬಳು ಬಂದು ಮೆನು ಕಾರ್ಡ್ ಹಿಡಿದಳು. ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿಮಾನವಾದ್ದರಿಂದ ಸಸ್ಯಹಾರಿ ಊಟ ಆಯ್ಕೆಮಾಡಿಕೊಳ್ಳಲು ಅವಕಾಶವಿದ್ದಿತು. ನಾನು ಸಸ್ಯಹಾರಿ ಊಟ ಆಯ್ಕೆ ಮಾಡಿಕೊಂಡೆ. ಸ್ವಲ್ಪ ಸಮಯದ ನಂತರ ಶೂರ್ಪಣಿಕಿ ಮತ್ತೆ ಬಂದು,  ಸಸ್ಯಹಾರಿ ಊಟ ಮುಗಿದಿದೆಯೆಂದು, ಮೀನು ಒಂದು ರೀತಿ ಸಸ್ಯಹಾರವೆಂದು, ಈವತ್ತು ಮಟ್ಟಿಗೆ ಮೀನು ತಿನ್ನಿರೆಂದು ಸೂಚಿಸಿದಳು. ನಾನು, ಮೀನು ಸಸ್ಯಹಾರಿಯೆ ಇರಬಹುದು ಆದರೆ ಅದನ್ನು ನಾನು ತಿಂದರೆ ಸಸ್ಯಹಾರಿಯಾಗುವುದಿಲ್ಲ ಎಂದೆ.

ನೀವು ಸಸ್ಯಾಹಾರ ಬೇಕಿದ್ದರೆ ಟಿಕೆಟ್ ಪಡೆಯುವ ಸಮಯದಲ್ಲಿ ತಿಳಿಸಬೇಕಾಗುತ್ತದೆ ಎಂದು ಹಳೇ ಕ್ಯಾತೆ ತೆಗೆದಳು. ನಾನು ಹಾಗಿದ್ದರೆ ನೀನು ನಿನ್ನ ಮೆನು ಪಟ್ಟಿಯಲ್ಲಿ ಸಸ್ಯಾಹಾರದ ಆಯ್ಕೆ ಏಕೆ ಮುದ್ರಿಸಿದೆ ಮತ್ತು ನನ್ನ ಬಳಿ ಅದರ ಆರ್ಡರ್ ಏಕೆ ತೆಗೆದುಕೊಂಡೆ ಎಂದು ಜಗಳವಾಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿರುವವರು ಹೆಚ್ಚು ಸಸ್ಯಹಾರಿಗಳೆ ಇದ್ದುದರಿಂದ ಸಸ್ಯಹಾರಿ ಊಟದ ಕೊರೆತೆಯುಂಟಾಗಿತ್ತು. ಇದರಿಂದ ಗಗನಸಖಿ ಕೆಲವರನ್ನು ಮಾಂಸಹಾರ ಊಟ ತೆಗೆದುಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಳು. ನಾನು ಜಗಳಗಂಟನೆಂದು ಊಹಿಸಿದ ಗಗನಸಖಿ ನನಗೆ ಸಸ್ಯಹಾರಿ ಊಟ ನೀಡಿದಳು. ಒಂದು ದಿನದಿಂದ ಊಟಕಾಣದ ನಾನು ಅದನ್ನು ತಿಂದು ಮುಗಿಸಿದೆ. ಸಂಜೆ ನಾಲ್ಕು ಗಂಟೆಯಾದರು ವಿಮಾನ ಮೇಲೇರುವ ಸೂಚನೆ ಕಾಣಲಿಲ್ಲ. ಕೊನೆಗೊಮ್ಮೆ ಮೂರೂ ಕಂಪ್ಯೂಟರ್ ಕೆಟ್ಟಿದೆಯೆಂದು ನಾಳೆ ಬೆಳಿಗ್ಗೆ ವಿಮಾನ ಹೊರಡುತ್ತದೆಂದು ಹೇಳಿದರು.

ಎಲ್ಲರೂ ಏರ್ ಪಸ್ಟ್ ವಿಮಾನವನ್ನು ದೂಷಿಸುತ್ತಾ ಕೆಳೆಗಿಳಿದು ಇನ್ನೊಂದು ಬಸ್ ಹತ್ತಿ ಮೊದಲು ಪ್ರಯಾಣಿಸಿದುದಕ್ಕಿಂತ ಹೆಚ್ಚಿನ ದೂರ ಪ್ರಯಾಣಿಸಿ ಏರ್ ಪಸ್ಟ್‍ನ ಕೌಂಟರ್ ಒಂದನ್ನು ಸೇರಿದೆವು. ಅಲ್ಲಿ ಸುಮರು ೨ ಗಂಟೆಗಳ ಕಾಲ ಕಾಯಬೇಕಾಯಿತು. ಮೊದಲ ಹತ್ತು ನಿಮಿಷ ಎಲ್ಲರೂ ಬಿಂಕ ಪ್ರದರ್ಶಿಸುತ್ತ ಕಾದು ನಿಂತೆವು. ನಂತರ ಅಲ್ಲೆ ಇದ್ದ ಗೊಡೆಗೊರಗಿ ನಿಂತು ಕಾದೆವು. ೧ ಗಂಟೆ ಕಾದ ನಂತರ ಒಬ್ಬೊಬ್ಬರಾಗಿ ನೆಲೆದ ಮೇಲೆ ಕುಳಿತುಕೊಳ್ಳಲಾರಂಬಿಸಿದೆವು. ನಮಗೆಲ್ಲರಿಗೂ ಪ್ಯಾರೀಸ್ ವೀಸ ದೊರೆತು ನಾವು ಹೋಟೆಲ್ ಸೇರುವ ಹೊತ್ತಿಗೆ ಸಂಜೆ ೭ ಗಂಟೆಯಾಗಿತ್ತು.

ನಮಗೆಲ್ಲರಿಗೂ ಗ್ರೂಪ್ ವೀಸ ಕೊಡಲಾಗಿತ್ತು. ನನಗೆ ನೀಡಿದ ವೀಸ ನಾನು ಮತ್ತು ಇನ್ನಿಬ್ಬರು ಸೇರಿದಂತೆ ಒಟ್ಟು ಮೂರು ಮಂದಿಗೆ ಸೇರಿಸಿಕೊಟ್ಟಿದ್ದರು. ನನಗೆ ಪ್ಯಾರೀಸ್ ಸುತ್ತಿ ನೋಡಬೇಕೆನಿಸಿದರು ನನ್ನ ಜೊತೆಯಿದ್ದ ಇನ್ನಿಬ್ಬರು ಅದರಲ್ಲಿ ಆಸಕ್ತಿ ತೋರಿಸಲಿಲ್ಲ. ನಮಗೆ ಸಮಯವು ಬಹಳ ಕಡಿಮೆ ಇದ್ದುದರಿಂದ ಹೋಟೆಲ್ ನಲ್ಲೆ ಊಳಿದುಕೊಂಡೆವು. ನಮಗೆ ರಾತ್ರಿ ಉಚಿತ ಊಟದ ಕೂಪನ್ ನೀಡಿದ್ದರು. ನಾವು ಮೂರು ಜನರು ಸಸ್ಯಹಾರಿಗಳಾದ್ದರಿಂದ ಸಸ್ಯಹಾರಿ ತಿನಿಸುಗಳನ್ನು ಆಯ್ಕೆಮಾಡಿಕೊಂಡೆವು. ನಾನು ಪಿಂಗರ್ ಚಿಪ್ಸ್ ಆಯ್ಕೆ ಮಾಡಿಕೊಂಡೆ. ನನ್ನ ಜೊತೆಯವರು ಪಾಸ್ಟ ಆಯ್ಕೆಮಾಡಿಕೊಂಡರು. ಪಾಸ್ಟವು ಸಿನಿಮಾ ಪೊಸ್ಟರಿಗೆ ಅಂಟಿಸಲು ಬಳಸುವ ಮೈದಾ ಹಿಟ್ಟಿನ ಚರಿಗೆ ಟಮೆಟೋ ಸಾಸ್ ಸೇರಿಸಿದಂತೆ ಇರುತ್ತದೆಯೆಂದು ನಾನದನ್ನು ಆಯ್ಕೆಮಾಡಿಕೊಳ್ಳಲಿಲ್ಲ. ನಾನು ಪಾಸ್ಟವನ್ನೊಮ್ಮೆ ಟರ್ಕಿಗೆ ಹೋಗಿದ್ದಾಗ ಸೇವಿಸಿದ್ದ.ಅಂದಿನಿಂದ ನನಗೆ ಪಾಸ್ಟವನ್ನು ನೆನೆಸಿಕೊಂಡರೆ ವಾಂತಿಗೆ ಬರುವುಂತಾಗುತ್ತಿತ್ತು. ನಾನು ನನ್ನ ಅನಿಸಿಕೆಗಳನ್ನು, ಅನುಭವಗಳನ್ನು ನನ್ನ ಜೊತೆಯಿದ್ದ ಇನ್ನಿಬ್ಬರಿಗೂ ತಿಳಿಸಿದೆ. ಅವರಿಬ್ಬರಿಗೂ ಪಾಸ್ಟ ತಿನ್ನಲಾಗಲಿಲ್ಲ.

ಬೆಳಿಗ್ಗೆ ೭ ಗಂಟೆಗೆ ಮತ್ತೆ ಪ್ಯಾರೀಸ್ ಏರ್ ಪೋರ್ಟ್ ಸೇರಿಕೊಂಡೆವು. ನಮ್ಮ ಜೊತೆ ಪ್ರಯಣಿಸುತ್ತಿದ್ದ ಹಲವು ಹುಡುಗ ಹುಡುಗಿಯರು ಒಂದೇ ದಿನದಲ್ಲಿ ಸ್ನೇಹಿತರಾಗಿಬಿಟ್ಟಿದ್ದರು. ಎಷ್ಟೋ ದಿನದ ಪರಿಚಯದಂತೆ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿರುವುದು ಕಂಡು ನನಗೆ ತುಂಬಾ ಆಶ್ಚರ್ಯವಾಯಿತು. ವಿಮಾನದ ಜಾಗ್ರತ ಸಂದೇಶಗಳೆಲ್ಲವೂ ಮುಗಿದ ನಂತರ ವಿಮಾನ ಮೇಲೇರಿತು. ಈ ಬಾರಿ ಗಗನಸಖಿಯರು ಯಾರನ್ನು ಸಸ್ಯಹಾರ ಬೇಕೆ ಮಾಂಸಹಾರ ಬೇಕೆ ಎಂದು ಕೇಳುವ ಗೋಜಿಗೆ ಹೋಗಲಿಲ್ಲ. ಎಲ್ಲರಿಗೂ ಸಸ್ಯಹಾರವನ್ನೆ ಬಡಿಸಿದರು. ಒಂದೆ ದಿನದಲ್ಲಿ ಪರಿಚಯವಾದ ಹುಡುಗಹುಡುಗಿಯರೆಲ್ಲ ಒಂದು ಕಿಟಕಿಯ ಬಳಿ ಗುಂಪು ಕಟ್ಟಿಕೊಂಡು ಏನನ್ನೋ ವೀಕ್ಷಿಸುತ್ತಿದ್ದರು. ಒಬ್ಬ ವಯಾಸ್ಸಾದ ಮುದುಕರು ಅವರಿಗೆ ಏನೋ ವಿವರಿಸಿತ್ತಿದ್ದರು. ಕುತೂಹಲದಿಂದ ನಾನು ನನ್ನ ಹತ್ತಿರವಿದ್ದ ಕಿಟಕಿಯಿಂದ ಕೆಳಗೆ ಇಣುಕಿ ನೋಡಿದೆ. ಕೆಳಗೆ ಎತ್ತರದ ಪರ್ವತಗಳು ಮತ್ತು ಅವುಗಳ ಮದ್ಯೆ ಸಮುದ್ರವಿದ್ದಂತೆ ಕಾಣುತ್ತಿತ್ತು. ಆ ಪರ್ವತಗಳ ಮಲೆಲ್ಲೂ ಎತ್ತರದ ಮರಗಾಳಾಗಲಿ, ಕಾಡಗಲಿ ಇದ್ದಂತೆ ಕಾಣಲಿಲ್ಲ. ಅವೆಲ್ಲವೂ ಕೆಮ್ಮಣ್ಣು ಗುಡ್ಡೆಗಳಂತೆ ಕಾಣುತ್ತಿದ್ದವು. ಅವುಗಳ ಮದ್ಯೆ ಕಡಿದಾದ ಕಣಿವೆಗಳಿದ್ದಂತೆ ತೋರುತ್ತಿತ್ತು. ವಿಮಾನ ಹಾರುತ್ತಿರುವ ಸ್ತಳದ ಭೂಪಟ ನೋಡಿದ. ಅಪ್ಘನಿಸ್ತಾನದ ಮೇಲೆ ಹಾರುತ್ತಿದಂತೆ ತೋರುತ್ತಿತ್ತು. ಮುದುಕ ಏನು ವಿವವರಿಸುತ್ತಿರಬಹುದೆಂದು  ಊಹಿಸಿದೆ. ಇಲ್ಲೇ ತಾಲಿಭಾನರು ಬೀಡುಬಿಟ್ಟು ಗೆರಿಲ್ಲ ಯುದ್ದ ನಡೆಸಿದ್ದರೆಂದು ತನಗೆ ಗೊತಿಲ್ಲದ ವಿಷಯದ ಬಗ್ಗೆ ಡೋಂಗಿಬಿಡುತ್ತಿರಬಹುದೆಂದು ಊಹಿಸಿದೆ.ಎರಡು ದಿನದ ಪ್ರಯಾಣದಿಂದ ತುಂಬಾ ದಣಿದಿದ್ದರಿಂದ ಹಾಗೆ ಆಸನಕ್ಕೊರಗಿ ತೂಕಡಿಸಲಾರಂಬಿಸಿದೆ.